ನಯವಾದ -
ತತ್ತ್ವವಿವೇಚನೆಯಲ್ಲಿ, ವಸ್ತುವಿನ ಅನಂತಧರ್ಮಗಳ ಮೇಲೆ ದೃಷ್ಟಿ ಇದ್ದರೆ ಅದಕ್ಕೆ ಸಕಲಾದೇಶ ಅಥವಾ ಪರಿಪೂರ್ಣ ದೃಷ್ಟಿಯ ವಿವೇಚನೆ ಎನ್ನುತ್ತಾರೆ. ಎಲ್ಲಿ ಒಂದು ಧರ್ಮಕ್ಕೆ ಮಾತ್ರ ಪ್ರಾಧಾನ್ಯ ಕೊಟ್ಟು, ಉಳಿದ ಧರ್ಮಗಳನ್ನು ಗೌಣವೆಂದು ತಿಳಿದುಕೊಳ್ಳಲಾಗುವುದೋ ಅದಕ್ಕೆ ವಿಕಲಾದೇಶ ಅಥವಾ ಅಪೂರ್ಣ ದೃಷ್ಟಿಯ ವಿವೇಚನೆ ಎನ್ನುತ್ತಾರೆ. ಸಕಲಾದೇಶಕ್ಕೆ ಪ್ರಮಾಣ ದೃಷ್ಟಿಯೆಂದೂ ವಿಕಲಾದೇಶಕ್ಕೆ ನಯದೃಷ್ಟಿಯೆಂದೂ ಹೇಳಲಾಗಿದೆ. ಸ್ಯಾದ್ವಾದ ಅನೇಕ ವಿರೋಧಿ ವಾದಗಳನ್ನು ಸಮನ್ವಯ ಮಾಡುವಾಗ ಅದರಲ್ಲಿ ನಯವಾದ ತನ್ನಿಂದ ತಾನೇ ರೂಪುಗೊಳ್ಳುತ್ತದೆ. ವಿಚಾರಿಸುವಾಗ, ಬೇರೆ ಬೇರೆ ದೃಷ್ಟಿಕೋನಗಳ ಪೃಥಕ್ಕರಣ, ಅವುಗಳ ವಿಷಯದ ಮರ್ಯಾದೆಯ ವಿಭಾಗಗಳನ್ನು ಮಾಡಿ, ಆಯಾ ವಿಭಾಗಕ್ಕೆ ತಕ್ಕಷ್ಟು ಸ್ಥಾನವನ್ನು, ಮಹತ್ತ್ವವನ್ನು ಕೊಟ್ಟು ಒಂದು ವಿಷಯದ ಬಗ್ಗೆ ವಿಶಿಷ್ಟದೃಷ್ಟಿಯಿಂದ ಸಮಾಲೋಚಿಸಿ ನಿರೂಪಣೆ ಮಾಡುವ ಕ್ರಮವೇ ಸ್ಯಾದ್ವಾದ. ಆದರಿಂದ ವಿಷಯ ವಿಭಜನೆಯ ಕ್ರಮಕ್ಕೇನೇ ನಯವೆಂದು ಹೆಸರು. ದ್ರವ್ಯ ಅಥವಾ ಪರ್ಯಾಯದ ಅಪೇಕ್ಷೆಯಿಂದ ವಿಶಿಷ್ಟ ಧರ್ಮದ ಕಥನವೇ ನಯ. ಇದು ಅರಿಯುವವನ ಅಭಿಪ್ರಾಯ ವಿಶೇಷವೇ ಸರಿ. ಮುಖ್ಯವಾಗಿ ನೈಗಮ, ಸಂಗ್ರಹ, ವ್ಯವಹಾರ, ಋಜುಸೂತ್ರ, ಶಬ್ದ, ಸಮಭಿರೂಢ ಮತ್ತು ಏವಂಭೂತ ಎಂಬ ಏಳು ನಯಗಳು ಸ್ವೀಕೃತವಾಗಿವೆ. ಜೈನಶಾಸ್ತ್ರ ರೀತ್ಯ ಇವುಗಳ ವಿವರಗಳು ಹೀಗಿವೆ: 1 ನೈಗಮನಯ- ಮುಂದಿನ ಸಂಕಲ್ಪದ ಮೇಲೆ ಲಕ್ಷ್ಯವಿಟ್ಟು ಪದಾರ್ಥದ ಗ್ರಹಣ ಮಾಡುವುದು. ಮಣ್ಣಿನ ಪಾತ್ರೆಯನ್ನು ತುಪ್ಪದ ಪಾತ್ರೆಯೆನ್ನುವುದು ಅಥವಾ ರಾಜಕುಮಾರನನ್ನು ರಾಜನೆನ್ನುವುದು. 2 ಸಂಗ್ರಹನಯ- ಸಾಮಾನ್ಯ ರೂಪದಿಂದ ಪದಾರ್ಥದ ಗ್ರಹಣವೇ ಸಂಗ್ರಹನಯ. ವಿಶ್ವದಲ್ಲಿಯ ಎಲ್ಲ ಭೇದಗಳನ್ನೂ ತೊರೆದು ಅಖಂಡತ್ವದ ವಿಚಾರ ಮಾಡುವಾಗ ವಿಶ್ವದ ಒಂದೇ ಅಖಂಡ ದರ್ಶನವಾಗುವುದು. ಸಂಸಾರದಲ್ಲಿಯ ಭಿನ್ನ ಭಿನ್ನ ವಸ್ತುಗಳಿಗೆ ಸತ್ ಅನ್ನುವುದು. ಸಣ್ಣ ದೊಡ್ಡ ಮತ್ತು ಬೇರೆ ಬೇರೆ ಗಡಿಗೆಗಳಿಗೆ ಗಡಿಗೆಯೆನ್ನುವುದು. 3 ವ್ಯವಹಾರನಯ- ಸಾಮಾನ್ಯ ರೂಪದಿಂದ ಗ್ರಹಣಮಾಡಿದ್ದನ್ನು ವಿಶೇಷ ರೂಪದಿಂದ ವಿವರಿಸುವುದು. ಸತ್ ಎಂಬುದರಲ್ಲಿ ದ್ರವ್ಯ ಮತ್ತು ಗುಣವನ್ನು ವಿಂಗಡಿಸಿ ಅರಿಯುವುದು. ಇಲ್ಲಿ ಗುಣವಿಶೇಷ, ವ್ಯಕ್ತಿವಿಶೇಷ ಇತ್ಯಾದಿಗಳ ಅರಿವು ಆಗುತ್ತದೆ. 4 ಋಜುಸೂತ್ರನಯ- ಭೂತ ಭವಿಷ್ಯತ್ ಕಾಲಗಳನ್ನುಳಿದು ವರ್ತಮಾನ ಕಾಲವನ್ನೇ ಗುರಿಯಿಟ್ಟು ಅರಿಯುವುದು. 5 ಶಬ್ದನಯ- ವ್ಯಾಕರಣ ದೃಷ್ಟಿಯಿಂದ ಶಬ್ದದ ಲಕ್ಷಣಗಳ ಆಶ್ರಯವನ್ನು ಸ್ವೀಕರಿಸಿಯೂ ಅರ್ಥದ ವಿಚಾರ ಮಾಡುವ ಮನೋವೃತ್ತಿ. 6 ಸಮಭಿರೂಢನಯ- ಶಬ್ದದ ಮೂಲಧಾತುವನ್ನು ತೋರಿಸಿ, ಒಂದೇ ಅರ್ಥದ ಕೆಲವು ಶಬ್ದಗಳು ಭಿನ್ನಾರ್ಥದವೆಂದು ತೋರಿಸಬಹುದು. ಹೀಗೆ ಶಬ್ದಾರ್ಥಗಳನ್ನು ವಿಭಜಿಸಿ ನೋಡುವ ಮತ್ತು ರೂಢಾರ್ಥವನ್ನು ಸ್ವೀಕರಿಸುವ ಮನೋವೃತ್ತಿ, 7 ಏವಂಭೂತನಯ- ಯಾವುದೊಂದು ವಸ್ತು ಎಲ್ಲಿಯವರೆಗೆ ಒಂದು ಕ್ರಿಯೆಯನ್ನು ಮಾಡುತ್ತಿರುವುದೋ ಅಲ್ಲಿಯವರೆಗೆ ಆ ವಸ್ತು ಆ ಕ್ರಿಯಾವಾಚಕ ಶಬ್ದದಿಂದ ಹೇಳಲ್ಪಡುವುದಕ್ಕೆ ಈ ಹೆಸರು. ಮೊದಲಿನ ನಾಲ್ಕು ಅರ್ಥನಯಗಳು; ಉಳಿದ ಮೂರು ಶಬ್ದ ನಯಗಳು. ಮೊದಲಿನ ಮೂರು ದ್ರವ್ಯಾರ್ಥಿತ. ಉಳಿದ ನಾಲ್ಕು ಪರ್ಯಾಯಾರ್ಥಿತ.
(ಎ.ಎನ್.ಯು.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ